ರಾಯಚೂರು.ಡಿ.೦೯– ಡಿಸೆಂಬರ್ ೧೯ ರಂದು ಬೆಂಗಳೂರಿನಲ್ಲಿ ಕಾರ್ಮಿಕ ಹಕ್ಕೋತ್ತಾಯ ಸಮಾವೇಶ ನಡೆಸಲಾಗುತ್ತದೆಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕ್ಕಿ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೇಶದಲ್ಲಿ ನೋಟು ಅಮಾನ್ಯೀಕರಣ, ಜಿಎಸ್ಟಿ, ಕೋವಿಡ್ ಮಹಾಮಾರಿ ದೇಶದ ೫೦ ಕೋಟಿ ಜನರ ಉದ್ಯೋಗ ಕಸಿದುಕೊಂಡಿದೆ. ಗಾಯದ ಮೇಲೆ ಬರೆ ಎನ್ನುವಂತೆ ಬೆಲೆ ಏರಿಕೆ ಕಾರ್ಮಿಕರ ಬದುಕನ್ನು ಅತ್ಯಂತ ಕ್ಲಿಷ್ಟಗೊಳಿಸಿದೆ. ದುಡಿಯಲು ಕೆಲಸವಿಲ್ಲ, ಕೆಲಸಕ್ಕೆ ಸರಿಯಾದ ವೇತನವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಮಿಕರು ತಮ್ಮ ಜೀವನ ನಿರ್ವಹಿಸುವಂತಹ ಆಡಳಿತ ವ್ಯವಸ್ಥೆ ದೇಶದಲ್ಲಿದೆ. ಕಾರ್ಮಿಕರಿಗೆ ರಕ್ಷಣೆ ಒದಗಿಸುವ ೪೪ ಕಾಯ್ದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಿಂಪಡೆಯುವ ಮೂಲಕ ಕಾರ್ಮಿಕರ ಹಕ್ಕುಗಳನ್ನೇ ಮೊಟಕುಗೊಳಿಸಿದ್ದಾರೆ.
ಕೇವಲ ೪ ವೇತನ ಸಂಹಿತೆ ಜಾರಿಗೊಳಿಸಿದ್ದಾರೆ. ಈ ರೀತಿಯ ದಮನಕಾರಿ ಆಡಳಿತದಿಂದ ಕಾರ್ಮಿಕರು ಅತ್ಯಂತ ಅತಂತ್ರಕ್ಕೆ ಗುರಿಯಾಗುವಂತಹ ಪರಿಸ್ಥಿತಿ ನಿರ್ಮಿಸಲಾಗಿದೆ. ಈ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ರೈತರ ಹೋರಾಟ ಮಾದರಿಯಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಮೇಲೆ ದಮನದ ವಿರುದ್ಧ ಈ ರೀತಿಯ ಹೋರಾಟ ನಡೆಸಿ, ೪೪ ಕಾಯ್ದೆಗಳನ್ನು ಪುನಃ ಜಾರಿಗೊಳಿಸಿಕೊಳ್ಳಲು ದಾರಿಯಾಗಿದೆ. ಡಿಸೆಂಬರ್ ೧೯ ರ ಸಮಾವೇಶದಲ್ಲಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ. ಈ ಸಮಾವೇಶ ಕಾರ್ಮಿಕರ ಭವಿಷ್ಯತ್ತಿಗೆ ಒಂದು ಕಾಯಕಲ್ಪ ನೀಡುವ ಮಹತ್ವದ ಸಮಾವೇಶವಾಗಲಿದೆ.
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ಹಿಂಪಡೆದಿದೆ. ಇದರೊಂದಿ ಕನಿಷ್ಟ ಬೆಂಬಲ ಬೆಲೆ ಜಾರಿಗೊಳಿಸಬೇಕು. ಕಾರ್ಮಿಕರಿಗೆ ೨೫ ಸಾವಿರ ವೇತನ ನೀಡುವ ಕಾಯ್ದೆಗಳನ್ನು ಜಾರಿಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಉದ್ಯೋಗ ಸೃಷ್ಟಿಯ ಉದ್ಯಮ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದ ಅವರು, ಒಟ್ಟು ೧೦ ಬೇಡಿಕೆಗಳು ಈ ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆಂದರು.
ಜಿಲ್ಲಾಧ್ಯಕ್ಷ ಜಿ.ಅಮರೇಶ ಮಾತನಾಡುತ್ತಾ, ೨೪ ಜಿಲ್ಲೆಗಳಿಂದ ಅನೇಕ ಕಾರ್ಮಿಕ ಮುಂದಾಳುಗಳು ಈ ಸಮಾವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಿಂದಲೂ ಸುಮಾರು ೩೦೦ ಕಾರ್ಮಿಕ ಮುಖಂಡರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ದಾದಾಸ್ ಅವರು ಉಪಸ್ಥಿತರಿದ್ದರು