ರಾಯಚೂರು :ದಿನೆ ದಿನೆ ಹೆಚ್ಚುತ್ತಿರುವ ಕೋರೋನಾ 3 ನೇ ಆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕೆಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂ, ಸಿಪಿಐ, ಎಸ್.ಯು.ಸಿ.ಐ.ಸಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಂದು ಲಾಕ್ ಡೌನ್ ವೀಕೆಂಡ್ ಕರ್ಫ್ಯೂ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಸಾರ್ವತ್ರಿಕವಾಗಿ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ವಿತರಿಸಬೇಕು.ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ಅಗತ್ಯ ನೆರವು ನೀಡಬೇಕು. ವಾರ್ಡ್ವಾರು ನಿರ್ದಿಷ್ಟ ನೌಕರರನ್ನು ನಿಯೋಜಿಸಿ , ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿ ಉಚಿತ ಪೌಷ್ಠಿಕ ಆಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಿ ಮೃತರ ಕುಟುಂಬದವರಿಗೆ ತಲಾ 1 ಲಕ್ಷ ಪರಿಹಾರ ನೀಡಬೇಕು.ಕೋವಿಡ್ ವಾರಿಯರ್ಸ್ ಗಳ ಜೀವನ ಭದ್ರತೆಗೆ ಅಗತ್ಯ ಕ್ರಮವಹಿಸಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚಿಸಬೇಕು.ಆರೋಗ್ಯ ವಲಯಕ್ಕೆ ಬಜೆಟ್ ಅನುದಾನವನ್ನು ಹೆಚ್ಚಿಸಿ ,ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು.
ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ 10 ಸಾವಿರ ನೇರ ನಗದು ವರ್ಗಾವಣೆ ಮಾಡುವ ಮೂಲಕ ಜನತೆಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿ ರಾಜ್ಯದ ಆರ್ಥಿಕತೆಯನ್ನು ಪುನರ್ ಶ್ವೇತನಗೊಳಿಸಬೇಕು.ಪ್ರತಿ ಕುಟುಂಬಕ್ಕೂ ತಲಾ 10 ಕೆ.ಜಿ ಉಚಿತ ಪಡಿತರ ವಿತರಿಸಬೇಕು.200 ದಿನಗಳ ಉದ್ಯೋಗಗಳನ್ನು ಮಹತ್ವಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಒದಗಿಸಬೇಕು.ಕೂಲಿಯನ್ನು ರೂ .600 ಕ್ಕೆ ಹೆಚ್ಚಿಸಬೇಕು.ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ನಗರಗಳಿಂದ ಗ್ರಾಮೀಣ ಪ್ರದೇಶಕ್ಕೆ ಅಸಂಘಟಿತರ ಮರುವಲಸೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಾಮರಸ ಮಾಲಿಪಾಟೀಲ್, ಚಂದ್ರಗಿರೀಶ್,ಆನಂದ,ಕೆ.ಜಿ.ವೀರೇಶ್,ಡಿ.ಎಸ್ ಶರಣಬಸವ ಸೇರಿದಂತೆ ಇತರರು ಉಪಸ್ಥಿತರಿದ್ದರು.